ಅಫೀಮು ಮಾರಾಟಗಾರರ ಬಂಧನ

ಬೆಂಗಳೂರು, ಸೆ.೧೧: ಮಾದಕ  ವಸ್ತು ಅಫೀಮು ಮಾರಾಟ  ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಉಪ್ಪಾರಪೇಟೆ ಪೊಲೀಸರು ೨.೫೦ ಲಕ್ಷ ರೂ. ಮೌಲ್ಯದ ಅಫೀಮನ್ನು ವಶಪಡಿಸಿಕೊಂಡಿದ್ದಾರೆ.

ವಾಲ್ಮೀಕಿನಗರ ಮತ್ತು ಕೆ.ಪಿ.ಅಗ್ರಹಾರ ನಿವಾಸಿಗಳಾದ ಅಹ್ಮದ್ (೨೪), ಗೋಪಿ (೨೪) ಬಂಧಿತ ಆರೋಪಿಗಳಾಗಿದ್ದಾರೆ.

ಸೆ.೧೦ರಂದು ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿ ಪಾರ್ಕ್ನ ಮೆಟ್ರೋ ರೈಲ್ವೆ ನಿಲ್ದಾಣದ ರಸ್ತೆಯ ಬಳಿ ಇಬ್ಬರು ಆರೋಪಿಗಳು ಮಾದಕವಸ್ತು ಅಫೀಮು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ್ಪಾರಪೇಟೆ ಪೊಲೀಸ್ ಠಾಣೆ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.  ಆರೋಪಿಗಳಿಂದ ೨.೫೦ ಲಕ್ಷ ರೂ. ಮೌಲ್ಯದ ೬೦೦ ಗ್ರಾಂ ತೂಕದ ಮಾದಕವಸ್ತು ಅಫೀಮು ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು  ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.